ಭಾರತದ ಹಳ್ಳಿಗಳು

ಭಾರತ ಹಳ್ಳಿಗಳ ನಾಡು. ಸುಮಾರು 5,58,000 ಹಳ್ಳಿಗಳಿರುವ ಈ ನಾಡಿನಲ್ಲಿ ಮೂಲಭೂತ ಏಕತೆ ಇದ್ದರೂ ವೈಶಾಲ್ಯ ಹಾಗೂ ವೈವಿಧ್ಯದ ಕಾರಣ ಹಳ್ಳಿಗಳ ವಿನ್ಯಾಸ ವಿಭಿನ್ನವಾಗಿದೆ. ಜೀವನದ ಮೂಲತತ್ತ್ವಗಳ ಅಂತಃಪ್ರವಾಹ ಎಲ್ಲೆಲ್ಲೂ ಒಂದೇ ಆಗಿದೆ ಎಂಬ ವಿಷಯ ಭಾರತದ ಗ್ರಾಮಸಮುದಾಯಗಳ ಅಧ್ಯಯನದಿಂದ ಸ್ಪಷ್ಟವಾಗುತ್ತದೆ. ಪ್ರಾಚೀನ ಕಾಲದಿಂದಲೂ ಕೆಲವು ಗೃಹಗಳ ಗುಂಪು ಮತ್ತು ಅವನ್ನು ಸುತ್ತುವರಿದಿರುವ ಸಾಗುವಳಿ ಮಾಡಲಾದ ಜಮೀನು ಪ್ರದೇಶಗಳನ್ನು ಗ್ರಾಮಗಳು ಒಳಗೊಂಡಿರುತ್ತವೆ. ಮೊದಲಿನಿಂದಲೂ ಭಾರತದ ಹಳ್ಳಿಗಳಲ್ಲಿ ವಿವಿಧ ಕಾರ್ಯಕ್ರಮಗಳ ವಿಶಿಷ್ಟ ಜೀವನ ಕ್ರಮವಿದ್ದು ತಮ್ಮದೇ ಆದ ಗ್ರಾಮಾಡಳಿತವನ್ನು ಬೆಳೆಸಿಕೊಂಡಿದ್ದುವು. ಈ ಚಟುವಟಿಕೆಗಳನ್ನು ಗ್ರಾಮಜೀವನ ಮತ್ತು ಗ್ರಾಮಸರ್ಕಾರ ಎಂದು ವಿಂಗಡಿಸಬಹುದು. ಗ್ರಾಮಜೀವನದ ಮುಖ್ಯ ಘಟಕ ಕುಟುಂಬ. ಆದ್ದರಿಂದ ಇಲ್ಲಿ ಪ್ರಾಥಮಿಕ ಬಾಂಧವ್ಯಗಳು ಪ್ರಧಾನವಾಗಿರುತ್ತವೆ, ನೆರೆಹೊರೆ ಮುಖ್ಯವಾಗಿರುತ್ತದೆ; ಆಚಾರ ಪದ್ಧತಿ, ಲೋಕರೂಢಿ, ಲೋಕನೀತಿ ಮುಂತಾದ ಅನೌಪಚಾರಿಕ ಅಭಿಕರಣಗಳು ಪ್ರಮುಖವಾಗಿರುತ್ತವೆ. ಸರಳವಾದ ಆರ್ಥಿಕ ಜೀವನ, ಪ್ರಕೃತಿಯೊಡನೆ ನೇರ ಸಂಪರ್ಕ, ಜನರಲ್ಲಿ ಧಾರ್ಮಿಕ ಮನೋವೃತ್ತಿ, ಮೂಢನಂಬಿಕೆ ಇತ್ಯಾದಿಗಳು ಗ್ರಾಮಸಮುದಾಯದ ಗಮನಾರ್ಹ ಲಕ್ಷಣಗಳು. ಗ್ರಾಮ ನಿವೇಶನ ವಿಶಿಷ್ಟವಾಗಿರುತ್ತದೆ. ಗ್ರಾಮಕ್ಕೆ ಸೇರಿರುವ ಭೂಪ್ರದೇಶವನ್ನು ವಸತಿ, ಕೃಷಿ ಮತ್ತು ಹುಲ್ಲುಗಾವಲಿಗಾಗಿ ಮೀಸಲಾಗಿರಿಸಲಾದ ಪ್ರದೇಶಗಳೆಂದು ವಿಭಾಗಿಸಬಹುದು. ನೀರಿನ ಸೌಕರ್ಯವಿರುವ ಎಡೆಯಲ್ಲಿ ವಸತಿನಿರ್ಮಾಣ, ವಿಭಿನ್ನ ವೃತ್ತಿಗಳನ್ನು ಕೈಗೊಂಡವರಿಗೆ ಪ್ರತ್ಯೇಕ ವಾಸಸ್ಥಳ ಮತ್ತು ಗ್ರಾಮದ ಮಧ್ಯಭಾಗದಲ್ಲಿ ಮಾರುಕಟ್ಟೆ, ಕೆಲವು ಹಳ್ಳಿಗಳಲ್ಲಿ ವಾರದ ಸಂತೆಗಾಗಿ ಒಂದು ಪ್ರತ್ಯೇಕ ಸ್ಥಳ ಇರುತ್ತದೆ. ಕೃಷಿಯೋಗ್ಯ ಜಮೀನುಗಳ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಪ್ರಾಚೀನ ಕಾಲದಿಂದಲೂ ಹಳ್ಳಿಗಳಲ್ಲಿ ಒಕ್ಕಲಿಗ ಒಡೆತನದ ವ್ಯವಸ್ಥೆ ಇದ್ದಿತು ಎಂಬುದಾಗಿ ಎ.ಎಸ್. ಆಲ್ಟೇಕರ್ ಅವರು ಅಭಿಪ್ರಾಯಪಟ್ಟರೆ ಗ್ರಾಮ ಮೊತ್ತಮೊದಲಿನಿಂದಲೂ ಸಮಗ್ರ ಗ್ರಾಮ ಸಮುದಾಯಕ್ಕೆ ಸೇರಿದ್ದಿತೇ ವಿನಾ ವ್ಯಕ್ತಿಗಲ್ಲ. ಒಟ್ಟಿನಲ್ಲಿ ರೈತವಾರಿ ಮತ್ತು ಕೂಡುಸ್ವಾಮ್ಯ ಎಂಬ ಎರಡು ತೆರನಾಗಿದ್ದ ವ್ಯವಸ್ಥೆಗಳಿದ್ದುವು ಎಂಬುದಾಗಿ ಹೆನ್ರಿ ಮೈನ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಬ್ರಿಟಿಷರ ಆಳ್ವಿಕೆಯಲ್ಲಿ ಜಮೀನ್ದಾರಿ ಪದ್ಧತಿ ಪ್ರಮುಖವಾಗಿತ್ತು.

	ಗ್ರಾಮೀಣ ಜನರು ಜೀವನೋಪಾಯಕ್ಕಾಗಿ ಬೇರೆ ಬೇರೆ ಕಸಬುಗಳನ್ನು ಅವಲಂಬಿಸಿದ್ದಾರೆ. ಅವುಗಳಲ್ಲಿ ಕೃಷಿಯೇ ಪ್ರಧಾನ, ಕಮ್ಮಾರ, ಬಡಗಿ, ಚಮ್ಮಾರ, ಕ್ಷೌರಿಕ, ಕುಂಬಾರ ಮುಂತಾದ ಇತರ ಗ್ರಾಮ ಕಸಬುದಾರರ ಆನುವಂಶಿಕ ವರ್ಗಗಳೂ ಮುಖ್ಯವಾಗಿವೆ. ಈ ವರ್ಗದ ಜನ ನಿರ್ವಹಿಸುವ ಕಾರ್ಯಗಳಿಗಾಗಿ ರೈತರು ಸುಗ್ಗಿಯ ಸಮಯದಲ್ಲಿ ವಾರ್ಷಿಕವಾಗಿ ಧಾನ್ಯರೂಪದಲ್ಲಿ ಅವರಿಗೆ ಸಂಭಾವನೆ ಕೊಡುತ್ತಾರೆ. ಅಂತೆಯೆ ಕಲ್ಲುಕುಟ್ಟಿಗ, ವ್ಯಾಪಾರಿ, ನೇಕಾರ, ಗಾಣಿಗ ಮುಂತಾದವರ ಸೇವೆಗೆ ತಕ್ಕ ಪ್ರತಿಫಲಗಳನ್ನು ಕೊಡಲಾಗುತಿತ್ತು. ಗ್ರಾಮಸ್ಥರ, ವೈಯಕ್ತಿಕ ಅವಶ್ಯಕತೆಗಳಲ್ಲದೆ ಸಮಗ್ರ ಗ್ರಾಮಕ್ಕೆ ಅನ್ವಯವಾಗುವ ದೇವಾಲಯ, ಚಾವಡಿ ಅಥವಾ ಸಭಾಭವನ, ಧರ್ಮಶಾಲೆ, ಬಾವಿ, ಕಾಲುವೆ, ಕೆರೆ, ರಸ್ತೆ ಹಾಗೂ ರಕ್ಷಣಾಕೋಟೆಗಳ ನಿರ್ಮಾಣ ಮತ್ತು ದುರಸ್ತಿ ಮುಂತಾದ ಸಾರ್ವಜನಿಕ ಉಪಯೋಗಿ ಕಾರ್ಯಗಳನ್ನೂ ಗ್ರಾಮವಾಸಿಗಳು ಮೊದಲು ಅಪ್ರೇರಿತ ಸಹಕಾರ ಹಾಗೂ ತೆರಿಗೆಗಳನ್ನು ಕೊಡುವುದರ ಮೂಲಕ ನಿರ್ವಹಿಸುತ್ತಿದ್ದರು. ಅನಂತರ ಕೇಂದ್ರ ಸರ್ಕಾರದ ಸಹಾಯ, ಖಾಸಗಿಯವರಿಂದ ದಾನ ಅಥವಾ ಸಾಲ ಪಡೆದು ಈ ಕೆಲಸಗಳನ್ನು ಪೂರೈಸುತ್ತಿದ್ದರು.

	ಹಳ್ಳಿಗಳಲ್ಲೇ ಶಿಕ್ಷಣ ಹಾಗೂ ವೈದ್ಯಕೀಯ ಆವಶ್ಯಕತೆಗಳನ್ನು ಪೂರೈಸಲು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿತ್ತು. ಶಿಕ್ಷಣ ಕುಟುಂಬದ ಕರ್ತವ್ಯವಾಗಿದ್ದಿತು. ತಂದೆ ತನ್ನ ಮಗನಿಗೆ ಗುರುವಾಗಿ ಬೋಧಿಸುತ್ತಿದ್ದ. ಅನಂತರ ಗ್ರಾಮ ಪುರೋಹಿತ ಗುರುಮಠಗಳಲ್ಲಿ ಹಳ್ಳಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದ. ಪ್ರತಿ ಹಳ್ಳಿಯಲ್ಲೂ ವೈದ್ಯಕೀಯ ವ್ಯವಸ್ಥೆ ಇರಲಿಲ್ಲವಾದರೂ ಗ್ರಾಮದ ಹಿರಿಯರು ಸಾಧಾರಣ ರೋಗಗಳಿಗೆ ನಾಡು ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಅನೇಕ ವೇಳೆ ಹಳ್ಳಿಯ ಅಧ್ಯಾಪಕ ಹಾಗೂ ಪುರೋಹಿತ ವರ್ಗದವರು ಗ್ರಾಮ ವೈದ್ಯರೂ ಆಗಿರುತಿದ್ದರು.

	ಜಾತಿ ಗುಂಪು ಮತ್ತು ಅವಿಭಕ್ತ ಕುಟುಂಬ ವ್ಯವಸ್ಥೆ ಗ್ರಾಮಜೀವನದ ಮುಖ್ಯ ಲಕ್ಷಣಗಳು. ಜಾತಿ ವ್ಯಕ್ತಿಯ ವೃತ್ತಿ ನಿರ್ಧರಿಸುವುದರಲ್ಲಿ ಸಹಾಯಕವಾಗಿತ್ತು. ಈ ವೃತ್ತಿಸಮೂಹಗಳು ಸ್ಥಾಯಿಯಾಗಿದ್ದು ಶ್ರಮವಿಭಜನಾ ವ್ಯವಸ್ಥೆಯನ್ನು ಪ್ರತಿನಿಧಿಸುತ್ತಿದ್ದುವು. ಅವಿಭಕ್ತ ಕುಟುಂಬ ಗ್ರಾಮಸಮುದಾಯದ ಘಟಕವಾಗಿದ್ದಿತು.

	ಭಾರತದ ಹಳ್ಳಿಗಳಲ್ಲಿ ವಿಶಿಷ್ಟ ಸಾಂಸ್ಕøತಿಕ ಚಟುವಟಿಕೆಗಳನ್ನು ನೋಡಬಹುದು. ರಾಮನವಮಿ, ದಸರಾ, ಹೋಳಿ ಮುಂತಾದ ಹಬ್ಬ ಹರಿದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಮತ್ತು ಗ್ರಾಮಸಂತೆಗಳಲ್ಲಿ ಹಾಡು, ನೃತ್ಯ, ನಾಟಕ, ಕುಸ್ತಿ, ಗೂಳಿಕಾಳಗ, ಗಾನಗೋಷ್ಠಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿಹಳ್ಳಿಯಲ್ಲೂ ಗ್ರಾಮದೇವತೆಯ ಗುಡಿಗಳನ್ನು ಕಾಣಬಹುದು. ಗ್ರಾಮದೇವಾಲಯ ಕೇವಲ ಆರಾಧನಸ್ಥಳ ಮಾತ್ರವಲ್ಲ. ಅದು ಒಂದು ಪಾಠಶಾಲೆ ನ್ಯಾಯಾಲಯ, ಪಥ ಶ್ರಮದಿಂದ ಬಳಲಿರುವ ಪ್ರಯಾಣಿಕನಿಗೆ ವಿಶ್ರಾಂತಿಧಾಮ, ಸಾಮಾಜಿಕ ಕೂಟ ಹಾಗೂ ಮನರಂಜನೆಗಳಿಗೆ ಕೇಂದ್ರವೂ ಆಗಿರುತ್ತದೆ. ಸಂಗೀತ ಗೋಷ್ಠಿಗಳಿಗಾಗಿ ಅಥವಾ ಸಾಮಾನ್ಯ ವಿಷಯಗಳನ್ನು ಚರ್ಚಿಸುವುದಕ್ಕಾಗಿ ಗ್ರಾಮಸ್ಥರು ಚಾವಡಿಗಳಲ್ಲಿ ಒಂದುಗೂಡುತ್ತಾರೆ. ಅಪರಿಚಿತರಿಗೆ ಹಾಗೂ ಅತಿಥಿಗಳಿಗೆ ಆತಿಥ್ಯ ನೀಡುವುದು, ದಲಿತರಿಗೆ ಬಡಬಗ್ಗರಿಗೆ ಸಹಾಯಮಾಡುವುದು, ಅತಿಥಿಭವನ, ದೇವಾಲಯ, ಧರ್ಮಶಾಲೆಗಳ ಪೋಷಣೆಗಾಗಿ ಗ್ರಾಮಸ್ಥರು ಆರ್ಥಿಕ ಸಹಾಯ ಮಾಡುವುದುಂಟು.

	ಪ್ರತಿ ಹಳ್ಳಿಯಲ್ಲೂ ಒಂದು ಸರ್ವ ಸಾಮಾನ್ಯ ಸಭೆ ಇರುತ್ತಿತು. ಈ ಸಭೆ ವರ್ಷದಲ್ಲಿ ಒಂದು ಸಲ (ಗ್ರಾಮದ ಮುಖ್ಯರನ್ನ) ಗ್ರಾಮದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಚುನಾಯಿಸುತ್ತಿತ್ತು. ಲೇವಾದೇವಿ, ದಾನ, ಗ್ರಾಮರಕ್ಷಣೆ, ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳು ವ್ಯಾಜ್ಯಗಳ ತೀರ್ಮಾನ, ದೇವಾಲಯದ ಮೇಲ್ವಿಚಾರಣೆ ಮುಂತಾದ ಕಾರ್ಯಗಳನ್ನೆಲ್ಲ ಈ ಸಮಿತಿ ನಿರ್ವಹಿಸುತ್ತಿದೆ. ಆದ್ದರಿಂದ ಇದನ್ನು ಪ್ರಜಾರಾಜ್ಯದ ಬೆನ್ನುಮೂಳೆ ಎಂದು ಕರೆಯಲಾಗಿದೆ.

	ಗ್ರಾಮದಲ್ಲಿ ಶಾಂತಿ, ಶಿಸ್ತುಪಾಲನೆ, ಸರ್ಕಾರಕ್ಕೆ ಸಂದಾಯವಾಗಬೇಕಾಗಿದ್ದ ಕಂದಾಯಗಳ ವಸೂಲಿ, ವ್ಯಾಜ್ಯನಿರ್ಣಯ ಮುಂತಾದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದ ಹಾಗೂ ಬಲುಮಟ್ಟಿಗೆ ಗ್ರಾಮಕ್ಕೆ ದೊರೆಯೇ ಆಗಿದ್ದ ಗ್ರಾಮಮುಖಂಡ (ಪಟೇಲ) ಗ್ರಾಮದ ವರಮಾನ-ವೆಚ್ಚ, ಜಮೀನು, ರೈತಾಪಿ ಜನ, ದನಕರು ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಇಡುತ್ತಿದ್ದ ಶಾನುಭೋಗ ಮತ್ತು ರಾತ್ರಿ ಕಾಲದಲ್ಲಿ ಪಹರೆ ಮಾಡುವುದು, ಎಲ್ಲ ಅಪರಿಚಿತರ ಮೇಲೆ ನಿಗಾ ಇಟ್ಟು ಸಂದೇಹಾಸ್ಪದ ವ್ಯಕ್ತಿಗಳು ಕಂಡು ಬಂದರೆ ತತ್‍ಕ್ಷಣ ಪಟೇಲನಿಗೆ ವರದಿಮಾಡುವುದು ಮತ್ತು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪಟೇಲ ಹಾಗೂ ಶಾನುಭೋಗನಿಗೆ ಸಹಾಯಮಾಡುವುದು ಮುಂತಾದ ಕರ್ತವ್ಯಗಳನ್ನು ನೆರವೇರಿಸುತ್ತಿದ್ದ ಚೌಕೀದಾರ ಭಾರತದ ಹಳ್ಳಿಗಳಲ್ಲಿ ಮುಖ್ಯ ಆಡಳಿತಾಧಿಕಾರಿಗಳಾಗಿದ್ದರು. ಗ್ರಾಮದ ವ್ಯಾಜ್ಯಗಳನ್ನು ತೀರ್ಮಾನಿಸುತ್ತಿದ್ದ ಗ್ರಾಮಪಂಚಾಯಿತಿ, ವಾಣಿಜ್ಯವವÀಹಾರಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದ ಶ್ರೇಣಿ ಮತ್ತು ಕುಟುಂಬಗಳ ವ್ಯಾಜ್ಯಗಳ ನಿರ್ಣಯಕ್ಕೆ ಸಂಬಂಧಿಸಿದ ಕುಲ ಇವು ಗ್ರಾಮದ ಮುಖ್ಯ ನ್ಯಾಯಾಲಯಗಳು. ಜಾತಿಗಳ ವ್ಯಾಜ್ಯಗಳನ್ನು ಪರಿಹರಿಸಲು ಜಾತಿಸಮಿತಿಗಳಿದ್ದುವು. ಮೊದಲಿನಿಂದಲೂ ಕೇಂದ್ರಸರ್ಕಾರದ ಆದಾಯಕ್ಕೆ ಮೂಲಾಧಾರವಾಗಿದ್ದ ಭೂಕಂದಾಯ, ತುಪ್ಪ, ಜೇನುತುಪ್ಪ ಇತ್ಯಾದಿ ಪದಾರ್ಥಗಳ ಮೇಲೆ ಹೇರಲಾಗುತ್ತಿದ್ದ ಸುಂಕ. ವ್ಯಾಪಾರಿಗಳು ಹಾಗೂ ಗ್ರಾಮ ಕಸುಬುದಾರನ ಮೇಲೆ ವಿಧಿಸಲಾಗುತ್ತಿದ್ದ ವೃತ್ತಿತೆರಿಗೆ ಭಾರತದ ಹಳ್ಳಿಗಳಲ್ಲಿ ಮುಖ್ಯವಾಗಿದ್ದ ಮೂರು ಬಗೆಯ ತೆರಿಗೆಗಳಾಗಿದ್ದುವು.

	ಬ್ರಿಟಿಷರ ಕಾಲದಲ್ಲಿ ಭಾರತದ ಹಳ್ಳಿಗಳು ಬದಲಾದವು. ಹಣಕಾಸಿನ ಮೇಲೆ ಆಧಾರಿತವಾಗಿದ್ದ ಆರ್ಥಿಕ ವ್ಯವಸ್ಥೆ ಮತ್ತು ವೈಯಕ್ತಿಕ ಸ್ವಾಮ್ಯ ಹಾಗೂ ಬೃಹತ್ ಪ್ರಮಾಣದ ಜಮೀನುದಾರಿ ಪದ್ದತಿಗಳನ್ನು ಜಾರಿಗೆ ತರಲಾಯಿತು. ಜಮೀನುಗಳು ಮಾರಬಹುದಾದ, ಕೊಂಡುಕೊಳ್ಳಬಹುದಾದ, ಅಡವಿಡಬಹುದಾದ ಮಟ್ಟಕ್ಕೆ ಬಂದುವು; ಜಮೀನುಗಳನ್ನು ವಿಭಜಿಸಲಾಯಿತು. ಇದರಿಂದ ರೈತರು ಬಡವರಾದರು, ಗ್ರಾಮಗಳಲ್ಲಿ ಋಣಭಾರ ಹೆಚ್ಚಿತು. ಬ್ರಿಟಿಷರ ಆರ್ಥಿಕ ನೀತಿಯ ಫಲವಾಗಿ ವ್ಯವಸಾಯ ಹಾಗೂ ಗೃಹಕೈಗಾರಿಕೆಗಳು ಕುಂಠಿತಗೊಂಡವು. ಗ್ರಾಮ ಪಂಚಾಯಿತಿಗಳು ನಿರ್ವಹಿಸುತ್ತಿದ್ದ ಕಾರ್ಯಗಳನ್ನೆಲ್ಲ ಬ್ರಿಟಿಷ್ ಸರ್ಕಾರ ವಹಿಸಿಕೊಂಡಿದ್ದರಿಂದ ಬೇರೆ ಬಗೆಯ ಆಡಳಿತ ಬಂದು ಗ್ರಾಮ ಸಂಸ್ಥೆಗಳು ನಿರ್ಜೀವವಾದವು. ಜಮೀನುಗಳ ವಿಭಜನೆ ಸುದ್ದಿ, ಸಂಚಾರ ವ್ಯವಸ್ಥೆ, ಆಧುನಿಕ ಶಿಕ್ಷಣ ನಗರಗಳತ್ತ ಯುವಜನಾಂಗವನ್ನು ಆಕರ್ಷಿಸುತ್ತಿದ್ದ ಉದ್ಯೋಗಾವಕಾಶ ಮತ್ತು ಇತರ ಸೌಲಭ್ಯಗಳು ಹಳ್ಳಿಗಳ ಅವಿಭಕ್ತಕುಟುಂಬದ ಅಸ್ತಿಭಾರವನ್ನೇ ಅಲ್ಲಾಡಿಸಿದುವು. ಕಾಲಕ್ರಮೇಣ ವಾರ್ಧಾ ಗ್ರಾಮೋದ್ಧಾರ ಹಂಚಿಕೆ, ಮದ್ರಾಸಿನ ಫರ್ಕ ಅಭಿವೃದ್ಧಿ ಯೋಜನೆ ಮುಂತಾದ ಅನೇಕ ಗ್ರಾಮ ಪುನರ್ನಿರ್ಮಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು. ಉದಾಹರಣೆಗೆ: ಭೂಭಾಗಗಳನ್ನು ಕೃಷಿಯೋಗ್ಯಪಡಿಸುವುದು, ಹೊಸ ನೀರಾವರಿ ಯೋಜನೆಗಳು, ಉತ್ತಮ ಬೀಜ, ಸಲಕರಣೆ ಹಾಗೂ ಗೊಬ್ಬರಗಳ ಉತ್ಪಾದನೆ ಹಾಗೂ ಸರಬರಾಜು ಮುಂತಾದ ವ್ಯವಸಾಯ ಸ್ಮಧಾರಣಾ ಕ್ರಮಗಳು, ಜಮೀನುಗಳನ್ನು ಪರಿಹಾರಧನ ಕೊಟ್ಟು ಕೊಳ್ಳುವುದು ಜಮೀನುಗಳಿಗೆ ಸಂಬಂಧಪಟ್ಟ ಸುಧಾರಣಾ ಯೋಜನೆ. ಸಾಲ ಕೊಟ್ಟವರ ದಬ್ಬಾಳಿಕೆಯಿಂದ ರೈತರನ್ನು ರಕ್ಷಿಸಿ ಹಳ್ಳಿಗಳಲ್ಲಿ ಸಣ್ಣ ಪ್ರಮಾಣದ ಗೃಹಕೈಗಾರಿಕೆಗಳನ್ನು ಬೆಳೆಸಿ ಪ್ರೋತ್ಸಾಹಿಸಲು ಬೇಕಾದ ಕ್ರಮಗಳು; ಗ್ರಾಮಗಳ ಸರ್ವತೋಮುಖ ಬೆಳವಣಿಗೆಗಾಗಿ ಸಾಮುದಾಯಿಕ ಅಭಿವೃದ್ಧಿ ಯೋಜನೆ, ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯಿತಿಗಳ ಸ್ಥಾಪನೆ. ಇವುಗಳಲ್ಲಿ ಸಾಮುದಾಯಿಕ ಅಭಿವೃದ್ಧಿ ಯೋಜನೆ ಮುಖ್ಯವಾಗಿದೆ. ವ್ಯವಸಾಯ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು; ನೀರಾವರಿ ವ್ಯವಸ್ಥೆ, ಸಾರಿಗೆ ಸಮಾಚಾರ ವ್ಯವಸ್ಥೆ, ಶಿಕ್ಷಣ, ತರಬೇತು, ಆರೋಗ್ಯ ವಸತಿ, ಸಮಾಜ ಕಲ್ಯಾಣ ಮತ್ತು ಇತರ ಪೂರಕ ಉದ್ಯೋಗಗಳು ಈ ಯೋಜನೆಯ ಪ್ರಮುಖಾಂಶಗಳು. ಗ್ರಾಮಗಳಲ್ಲಿ ಸಹಕಾರ ಸಂಘಗಳನ್ನು ಸುಧಾರಿಸಲು ಮತ್ತು ಸಮಾಜ ಶಿಕ್ಷಣವನ್ನು ಜಾರಿಗೆ ತರಲು ತಕ್ಕ ಕ್ರಮಗಳನ್ನು ಕೈಗೊಳ್ಳಲಾಗಿದೆ. 1952 ಅಕ್ಟೋಬರ್ 2ರಂದು ಉದ್ಘಾಟಿಸಲಾದ ಈ ಯೋಜನೆ ಸರ್ಕಾರವನ್ನು ಅವಲಂಬಿಸಿರುವುದರಿಂದ ಆಂತರಿಕ ವಿರೋಧಗಳನ್ನು ಬಗೆಹರಿಸುವುದಕ್ಕಾಗಿ ಪಂಚಾಯತ್‍ರಾಜ್ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಗ್ರಾಮಸ್ಥರಿಗೆ ತರಬೇತನ್ನು ನೀಡಲು ಇವನ್ನು ವ್ಯವಸ್ಥೆಗೊಳಿಸಲಾಯಿತು. ಅನಂತರದ ವರ್ಷಗಳಲ್ಲಿ ತಲೆದೋರಿದ ಆಹಾರಾಭಾವ ಉತ್ಪಾದನೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಯೋಜಿಸುವ ಆವಶ್ಯಕತೆಯನ್ನು ಎತ್ತಿತೋರಿಸಿತು. ಇದರ ಫಲವಾಗಿ ಸ್ವಾಭಾವಿಕವಾಗಿ ಫಲವತ್ತಾದ ಮಣ್ಣು ಹಾಗೂ ನೀರಾವರಿ ಸೌಲಭ್ಯಗಳಿಂದ ಕೂಡಿರುವ ಆಯ್ದ ಪ್ರದೇಶಗಳಲ್ಲಿ ವ್ಯಯಸಾಯೋತ್ಪನ್ನವನ್ನು ಹೆಚ್ಚಿಸುವುದಕ್ಕಾಗಿ ಕೇಂದ್ರೀಕೃತ ವ್ಯಯಸಾಯಾಭಿವೃದ್ಧಿ ಹಾಗೂ ಕೃಷಿ ಕ್ಷೇತ್ರಕಾರ್ಯಕ್ರಮ ಮುಂತಾದ ಯೋಜನೆಗಳು 1960ರ ಅನಂತರದ ವರ್ಷಗಳಲ್ಲಿ ಬೆಳಕಿಗೆ ಬಂದುವು. ಈ ಎಲ್ಲ ಸಂಚಿತ ಪ್ರಯತ್ನಗಳ ಪರಿಣಾಮವಾಗಿ ಮೂಡಿದುದೇ ಹಸಿರು ಕ್ರಾಂತಿ.

	1970ರ ತರುವಾಯ ಸಹಾಯ ಪಡೆಯಲು ಅರ್ಹವಾಗಿರುವ ಸಮೂಹದ ನಿರ್ದಿಷ್ಟ ಗುರಿಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಯಿತು. ಸಣ್ಣಪುಟ್ಟ ರೈತರ ಭೂರಹಿತರ ಕೆಲಸಗಾರರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಮತ್ತು ಆದಿವಾಸಿ ಜನರ ಸ್ಥಿತಿಗತಿಗಳನ್ನು ಸುಧಾರಿಸಲು ಅನೇಕ ಯೋಜನೆಗಳನ್ನು ಸರ್ಕಾರ ಕೈಗೊಂಡಿತು.

	ಇತ್ತೀಚಿನ ವರ್ಷಗಳಲ್ಲಿ ಪರ್ವತಪ್ರದೇಶ, ಬಂಜರುಭೂಮಿ, ಗ್ರಾಮಕೈಗಾರಿಕೆ ಮತ್ತು ಗ್ರಾಮ ಕೈಕೆಲಸಗಾರರನ್ನು ಕುರಿತು ಮತ್ತು ವ್ಯವಸಾಯ, ಪಶು ಸಂಗೋಪನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ.												
(ಎಂ.ಬಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ